For byndoor Directory Call: 9738877358

For byndoor Directory Call: 9738877358

Laptop for sell

Laptop for sell

ಸಂದರ್ಶನ: ಜೀವನ ಪ್ರೀತಿಯ ಸೃಜನಾತ್ಮಕ ಸಾಹಿತಿ ಜಯಂತ ಕಾಯ್ಕಿಣಿಜಾತಿ, ಧರ್ಮ, ಲಿಂಗ ಭೇದ ಮರೆತು ಮನುಷ್ಯರಾಗುವುದೇ ನಿಜವಾದ ಆಧುನಿಕತೆ: ಕಾಯ್ಕಿಣಿ

ಕನ್ನಡದ ಸೃಜನಾತ್ಮಕ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿಕೊಂಡವರು ಜಯಂತ ಕಾಯ್ಕಿಣಿ. ತಮ್ಮ ಕಥೆ, ಕವನ, ಬರಹಗಳ ಮೂಲಕ ಜನಪ್ರಿಯರಾದ ಅವರು ವಾಗ್ಮಿಯಾಗಿಯೂ ಕನ್ನಡಿಗರ ಮನಗೆದ್ದವರು. ಟಿವಿ ಪರದೆಯ ಮುಂದೆ ನಿಂತು ಉತ್ತಮ ನಿರೂಪಕರೆನಿಸಿಕೊಂದ್ದ ಕಾಯ್ಕಿಣಿ ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ, ಬದುಕಿನ ಚಿಕ್ಕ ಘಟನೆಯೇ ಇರಲಿ ಅದನ್ನು ಚಂದದ ಚೌಕಟ್ಟಿನೊಳಗೆ ಚಿತ್ರಿಸುವ ಅವರ ಜೀವನ ಪ್ರೀತಿಯ ಮಾತು ಮತ್ತು ಕೃತಿಗಳು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತದೆ. 
    ಇತ್ತಿಚಿಗೆ ಕುಂದಾಪ್ರ ಡಾಟ್ ಕಾಂ ಗೆ ಕಾಯ್ಕಿಣಿಯವರು ಮಾತಿಗೆ ಸಿಕ್ಕರು. ಅವರ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.

ಕುಂದಾಪ್ರ ಡಾಟ್ ಕಾಂ: ತಮ್ಮ ಮಾತು ಮತ್ತು ಕೃತಿಗಳಲ್ಲಿ ಮುಂಬೈ ನಗರಿಯ ಜೊತೆಗೆ ಯುವಜನತೆಯನ್ನು ಕೇಂದ್ರಿಕರಿಸಿ ಮಾತನಾಡುತ್ತಿರಿ. ಆಧುನಿಕತೆಯ ಮರುಳಾಗಿರುವ ಯುವಜನರಿಂದ ನೀವೆನನ್ನು ಕಂಡುಕೊಳ್ಳಬಯಸುತ್ತಿರಿ?
ಕಾಯ್ಕಿಣಿ:  ಆಧುನಿಕತೆ ಎಂದರೆ ಅತ್ಯಾಧುನಿಕ ಮೊಬೈಲ್ ಕೊಳ್ಳುವುದೊ, ಅತ್ಯಾಧುನಿಕ ಉಡುಗೆ ತೊಡುವುದೋ, ಹೊಸ ಸಿನೆಮಾಗಳನ್ನು ನೋಡುವುದೋ ಇಷ್ಟೇ ಅಲ್ಲ. ಆಧುನಿಕತೆ ಎಂದರೆ ಜಾತಿ, ಧರ್ಮ, ಮತಪಂಥಗಳಿಂದ ಮುಕ್ತವಾದ ಸಮಾನತೆಯನ್ನು ಸಾಧಿಸುವುದಾಗಿದೆ. ಸಮಾಜದಲ್ಲಿ ಜಾತಿ, ಧರ್ಮ, ಲಿಂಗ ಭೇದ ಮರೆತು ಮನುಷ್ಯರೆಲ್ಲರೂ ಒಂದೇ ಎನ್ನುವ ನಿಲುವು ತಾಳುವುದು ಬಹಳ ಮುಖ್ಯ. ಇಂದಿನ ಜನತೆ ವೇಷಭೂಷಣಗಳಲ್ಲಷ್ಟೇ ಆಧುನಿಕರಾಗುತ್ತಿದ್ದಾರೆ. ಆದರೆ ಅವರ ಮನಸ್ಸಿನಲ್ಲಿ ಜಾತಿ, ಮೌಢ್ಯ, ಮೂಢನಂಬಿಕೆಗಳೇ ತುಂಬಿಕೊಳ್ಳುತ್ತಿವೆ. ಯುವಜನರು ಇವೆಲ್ಲವುಗಳಿಂದ ಮುಕ್ತವಾಗಿರಬೇಕು ಎಂಬುದು ನನ್ನ ಆಶಯ. ಅವರು ಯಾವುದೋ ಮೂಢನಂಬಿಕೆಗೆ ಮರಳಾಗುವ, ರಾಜಕೀಯ ಪಕ್ಷದ ಮುಖವಾಣಿಯಾಗುವ ಬದಲು ಮನುಷ್ಯ ಪಕ್ಷಪಾತಿಯಾಗಿ ಬದುಕಬೇಕಿದೆ.

ಸಾಹಿತಿ ಜಯಂತ ಕಾಯ್ಕಿಣಿಯೊಂದಿಗೆ ಸಂಪಾದಕ ಸುನಿಲ್ ಬೈಂದೂರು
ಕುಂದಾಪ್ರ ಡಾಟ್ ಕಾಂ:  ಮನುಷ್ಯನಲ್ಲಿ ವಸ್ತು ಪ್ರೀತಿ ಜಾಸ್ತಿಯಾಗುತ್ತಿದೆ ಎಂದೆನಿಸುತ್ತಿದೆಯೇ?
ಕಾಯ್ಕಿಣಿ:  ಬದುಕನ್ನು ಪ್ರೀತಿಸಿದರೆ ಸಹಜವಾಗಿ ಎಲ್ಲವೂ ಸಿಗುತ್ತದೆ. ಪ್ರೀತಿ ಕೊಟ್ಟವರಿಗೆ ಮಾತ್ರ ಪ್ರೀತಿ ಸಿಗುತ್ತದೆ ಎಂಬುದನ್ನು ಅರಿತರೆ ವಸ್ತು ಪ್ರೀತಿ ಕಡಿಮೆಯಾದಿತು. 

ಕುಂದಾಪ್ರ ಡಾಟ್ ಕಾಂ: ಯಶಸ್ವೀ ಹಾಡುಗಳಿಗೆ ಸಾಹಿತ್ಯ ಬರೆದು ಇಂದಿನ ಯುವಜನತೆ ಕನ್ನಡ ಹಾಡುಗಳನ್ನು ಗುನುಗುನಿಸುವಂತೆ ತಾವು ಒಂದು ಹೊಸ ಅಲೆ ಪ್ರಾರಂಭ ಮಾಡಿದಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?
ಕಾಯ್ಕಿಣಿ:  ಬಹಳ ಖುಷಿಯಿದೆ. ಹೊಸ ತಲೆಮಾರಿನ, ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡ ಹಾಡುಗಳನ್ನು ಮೆಚ್ಚಿದ್ದು ಒಂದು ರೀತಿಯ ಖುಷಿ . ಇಂಥ ಕ್ರಾಂತಿಯನ್ನು ತೋರಿಕೆಗಾಗಿ ಉದ್ದುದ್ದ ಭಾಷಣಗಳನ್ನು ಬಿಗಿದು ಕನ್ನಡ ಪ್ರೇಮ ತೋರುವವರಿಂದ ತರಲಾಗುವುದಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು 'ಅಕ್ಕ' ಸಮ್ಮೇಳನಕ್ಕೆಂದು ಅಮೇರಿಕ, ಇಂಗ್ಲೆಂಡ್ ಗಳಿಗೆ ಹೋದಾಗ, ಕಾರುಗಳಲ್ಲಿ ಮುಂಗಾರುಮಳೆಯ ಹಾಡುಗಳನ್ನು ಕೇಳುತ್ತಿದ್ದರು . ಹೀಗೆ ಮಾಡುವಂತಾಗಿದ್ದು  ಸಹ ಒಂದು ರೀತಿಯ ಕನ್ನಡದ ಸೇವೆಯೇ.

ಕುಂದಾಪ್ರ ಡಾಟ್ ಕಾಂ:  ಮಾಧ್ಯಮ ಕ್ಷೇತ್ರದಲ್ಲಿ ಕೆಲವೊಂದಿಷ್ಟು ಕಾಲ ನೀವು ತೊಡಗಿಸಿಕೊಂಡವರು. ಟಿ.ಆರ್.ಪಿ ಹಾಗೂ ಮಾಧ್ಯಮ ಮಂದಿಯ ಬದುಕು ಇವೆರಡನ್ನು ಹೇಗೆ ಸರಿದೂಗಿಸಿಕೊಳ್ಳಬಹುದು?
ಕಾಯ್ಕಿಣಿ: ಮಾಧ್ಯಮ ಸತ್ಯದ ಪಕ್ಷಪಾತಿಯಾಗಿರಬೇಕು. ಸಮಾನತೆಯನ್ನು ನಂಬಿಕೊಂಡಿರಬೇಕು. ದುಡ್ಡಿಗಾಗಿ ಯಾವುದೇ ಪಕ್ಷವನ್ನು ಬೆಂಬಲಿಸೋದು, ಯಾವುದೋ ಕಾರ್ಯಕ್ರಮವನ್ನು ಪ್ರಸರಿಸೋದು. ಇಂತವುಗಳನ್ನು ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಪ್ರಜೆಯ ಧ್ವನಿಯಾಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಸಾಕ್ಷಿಯನ್ನು ಜೀವಂತವಾಗಿರಿಸಿಕೊಳ್ಳಬೇಕು. ಇದಕ್ಕೆ ಸಾಹಿತ್ಯ ಕಾರಣವಾಗುತ್ತದೆ. ಸಮಯದ ನೆಪ ಹೇಳಿ ಸಾಹಿತ್ಯ ಓದಿನಿಂದ ದೂರ ಉಳಿಯುವುದು ಕೂಡ ದೃಶ್ಯ ಮಾಧ್ಯಮಗಳಲ್ಲಿ ಸೃಷ್ಟಿಯಾಗುವ ಅವಾಂತರಗಳಿಗೆ ಪ್ರಮುಖ ಕಾರಣ.

ಕುಂದಾಪ್ರ ಡಾಟ್ ಕಾಂ: ಕುಂದಾಪುರದ ಬಗೆಗೆ ನಿಮಗೇನು ಗೊತ್ತು?
ಕಾಯ್ಕಿಣಿ:  ಕುಂದಾಪುರ ನಮಗೆ ಮೊದಲಿಂದಲೂ ಬಹಳ ಆಪ್ತ. ನನ್ನ ಬಾಲ್ಯದ ಗೆಳೆಯನೊಬ್ಬ ಕುಂದಾಪುರ ಸಮೀಪದ ಅಜ್ಜಿ ಮನೆಗೆ ಹೋಗಿ ಬಂದಾಗಲೆಲ್ಲಾ ಕುಂದಾಪ್ರ ಕನ್ನಡದಲ್ಲಿ ಮಾತನಾಡುತ್ತಿದ್ದ. ಇದು ಕುಂದಾಪುರವನ್ನು ಸ್ವಲ್ಪ ಮಟ್ಟಿಗೆ ಪರಿಚಯಿಸಿತ್ತು. ಆ ಬಳಿಕ ಕಾರಂತರು, ಅಡಿಗರು, ಎ.ಎಸ್.ಎನ್. ಹೆಬ್ಬಾರ್, ಯು.ಎಸ್. ಶೆಣೈ, ಮೂರುಮುತ್ತು ಖ್ಯಾತಿಯ ಸತೀಶ್ ಪೈ, ಅಶೋಕ ಶ್ಯಾನುಭೋಗ್ ಮುಂತಾದವರಿಂದಾಗಿ ಕುಂದಾಪುರವನ್ನು ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ನದಿ, ಸೇತುವೆ, ಸಮುದ್ರ ಇವೆಲ್ಲವುಗಳ ನಡುವಿನ ನಗರ ತುಂಬಾ ಆಪ್ತವಾದ ಭಾವನೆಯನ್ನು ನೀಡಿದೆ.

-ಸುನಿಲ್ ಬೈಂದೂರುಕಾಯ್ಕಿಣಿ ಕಥನ:
     ಕನ್ನಡದ ಸೃಜನಾತ್ಮಕ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿಕೊಂಡವರು ಜಯಂತ ಕಾಯ್ಕಿಣಿ. ತಮ್ಮ ಕಥೆ, ಕವನ, ಬರಹಗಳ ಮೂಲಕ ಜನಪ್ರಿಯರಾದ ಅವರು ಉತ್ತಮ ವಾಗ್ಮಿಯೂ ಹೌದು. ಟಿವಿ ಪರದೆಯ ಮುಂದೆ ನಿಂತು ಉತ್ತಮ ನಿರೂಪಕರೆನಿಸಿಕೊಂಡಿದ್ದರು ಕಾಯ್ಕಿಣಿ ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ, ಬದುಕಿನ ಚಿಕ್ಕ ಘಟನೆಯೇ ಇರಲಿ ಅದನ್ನು ಚಂದದ ಚೌಕಟ್ಟಿನೊಳಗೆ ಚಿತ್ರಿಸುವ ಅವರ ಜೀವನ ಪ್ರೀತಿಯ ಮಾತು ಮತ್ತು ಕೃತಿಗಳು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತದೆ. 

     ಜಯಂತ ಕಾಯ್ಕಿಣಿಯವರ ತಂದೆ ಗೌರೀಶ ಕಾಯ್ಕಿಣಿ ಶ್ರೇಷ್ಠ ವಿದ್ವಾಂಸರೂ ಅಪ್ರತಿಮ ವಿಚಾರವಾದಿಗಳು ಆಗಿದ್ದರು ಮತ್ತು ತಾಯಿ ಶಾಂತಾದೇವಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಸಂಸ್ಕೃತ ಕುಟುಂಬದಲ್ಲಿ ಹಾಗೂ ಸಾಹಿತ್ಯಕ ವಲಯದಲ್ಲಿ ಬೆಳೆದ ಕಾಯ್ಕಿಣಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ಬಯೋಕೆಮಿಸ್ಟ್ರಿ’ಯಲ್ಲಿ ಎಂ. ಎಸ್ ಸಿ. ಪದವಿ ಪಡೆದು, ಅನಂತರ  ಮುಂಬಯಿಗೆ ತೆರಳಿ, ಅಲ್ಲಿ ಪ್ರಸಿದ್ಧ ಕಂಪನಿಗಳಲ್ಲಿ ಸುಮಾರು 23 ವರ್ಷಗಳ ಕಾಲ ಕೆಲಸಮಾಡಿದರು. ಅಲ್ಲಿ ಸಹೋದ್ಯೋಗಿ ಸ್ಮಿತಾ ಎಂಬುವವರನ್ನು ಮದುವೆಯಾದರು. 

    ವಿದ್ಯಾರ್ಥಿಯಾಗಿದ್ದಾಗಲೇ ಕಥೆ-ಕವನಗಳ ರಚನೆಯನ್ನು ಪ್ರಾರಂಭಿಸಿದ್ದ ಜಯಂತ್, ಮುಂಬಯಿಯಲ್ಲಿದ್ದ  ಯಶವಂತ ಚಿತ್ತಾಲ,  ವ್ಯಾಸರಾಯ ಬಲ್ಲಾಳ, ಮುಂತಾದ ಹಿರಿಯ ಲೇಖಕರ ಒಡನಾಟದಿಂದಾಗಿ ಬಹು ಬೇಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದರು. ಇವರ ಹೆಚ್ಚಿನ ಕಥೆ-ಕವನ-ಪ್ರಬಂಧಗಳಲ್ಲಿ ಕಂಡುಬರುವುದು ಮುಂಬಯಿ ಎಂಬ ದೈತ್ಯ ನಗರ ಹಾಗೂ ಅಲ್ಲಿನ ಸಾಮಾನ್ಯ ಜನರ ಬದುಕಿನ ಹೋರಾಟ. ಮುಂದೆ ಕಾಯ್ಕಿಣಿ ತಮ್ಮ ಮುಂಬಯಿಯ ಬದುಕನ್ನು ತೊರೆದು ಬೆಂಗಳೂರಿಗೆ ಬಂದರು. ಪ್ರಾರಂಭದಲ್ಲಿ ಭಾವನಾ ಎಂಬ ವಿಶಿಷ್ಟ ಮಾಸಪತ್ರಿಕೆಯ ಸಂಪಾದಕರಾಗಿ ಎರಡು ವರ್ಷಗಳ ಕಾಲ ದುಡಿದು, ಅನಂತರ, ಕಥೆ-ಕವನಗಳ ರಚನೆಯೊಡನೆ ಚಿತ್ರ-ಕಥೆಗಳನ್ನು ಸಿದ್ಧಪಡಿಸುವುದು, ಚಿತ್ರಗೀತೆಗಳ ರಚನೆ, ಕಿರು ತೆರೆಯಲ್ಲಿ (ಇ-ಟಿವಿ) ‘ನಮಸ್ಕಾರ’ ಎಂಬ ಹೆಸರಿನ ವಿಶಿಷ್ಟ ಸಂದರ್ಶನ ಮಾಲಿಕೆಯ ನಿರ್ಮಾಣ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ (ಜ಼ಿ-ಟಿವಿ) ತೀರ್ಪುಗಾರರಾಗಿ ಕಾರ್ಯನಿರ್ವಹಣೆ, ಇತ್ಯಾದಿ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
    ಜಯಂತರ ಕಥೆಗಳು ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಅಮೃತಾ ಹಾಗೂ ವಂತಿ ಪ್ರಸಂಗ ನಾಟಕಗಳು ರಂಗದ ಮೇಲೆ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಇವರ ಕೃತಿಗಳಿಗೆ ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ (1975, 1982, 1989, 1996) ಸೇರಿದಂತೆ, ದಿನಕರ ದೇಸಾಯಿ ಪ್ರಶಸ್ತಿ, ಶ್ರೀಧರ ಪ್ರಶಸ್ತಿ, ಕಥಾ ನ್ಯಾಶನಲ್ ಅವಾರ್ಡ್, ‘ಕುಸುಮಾಗ್ರಜ ಪ್ರಶಸ್ತಿ’ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಹೀಗೆ  ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. 

ಹಾಗೆಯೇ, ವರ್ಷದ ಅತ್ಯುತ್ತಮ ಚಲನಚಿತ್ರ ಸಂಭಾಷಣೆ ಹಾಗೂ ಗೀತೆಗಳಿಗೆ ಕರ್ನಾಟಕ ಸರಕಾರ ನೀಡುವ ಪ್ರಶಸ್ತಿಗಳನ್ನು ಎರಡು ಬಾರಿ, ಮತ್ತು ಫ಼ಿಲ್ಮ್‌ಫ಼ೇರ್ ಪ್ರಶಸ್ತಿಯನ್ನು ಮೂರು ಬಾರಿ ಇವರಿಗೆ ಲಭಿಸಿದೆ. 

ಕವಿಯಾಗಿ ಕನ್ನಡ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ ಜಯಂತರ ಮೊದಲ ಕವನ ಸಂಕಲನ  19ನೆಯ ವಯಸ್ಸಿನಲ್ಲಿಯೇ ಪ್ರಕಟವಾಯಿತು. ಈವರೆಗೆ ಜಯಂತ್  5 ಕವನ ಸಂಕಲನಗಳು, 7 ಕಥಾ ಸಂಕಲನಗಳು, 3 ನಾಟಕಗಳು, 2 ಪ್ರಬಂಧ ಸಂಕಲನಗಳು, ನೂರಾರು ಚಿತ್ರಗೀತೆಗಳನ್ನು ಬರೆದು ಕಣ್ಮಣಿ ಎನಿಸಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com
3:40 PM | 0 comments

ಹೌಂದೇರಾಯನ ಓಲಗ: ಫಲ -ಸಮೃದ್ಧಿಗಾಗಿ ಕುಂದಗನ್ನಡದ ವಿಶಿಷ್ಟ ಜಾನಪದ ನೃತ್ಯ ಆಚರಣೆ

ಸ್ವಾಮಿಗಿಂದು ವಾಲ್ಗುವೆ...ತಾಯಿ ತುಳುಸಿ ವಾಲ್ಗುವೆ.. ಸರ್ವದೇವರಿಗೆ ವಾಲ್ಗುವೇ..
     ಹೌಂದೇರಾಯನ ಕುಣಿತವು ಮೂಲತಃ ತುಳಸಿ ಪೂಜೆಯ ಸಂದರ್ಭದಲ್ಲಿ ದೇವತಾರಾಧನೆಯ ಭಾಗವಾಗಿ ಜನಪ್ರಿಯವಾದ ಜಾನಪದ ಕಲಾ ಪ್ರಕಾರ. ಉಡುಪಿ ಜಿಲ್ಲೆಯ ಕುಂದಾಪುರ ಕರಾವಳಿ ಪ್ರದೇಶದಲ್ಲಿ ಈ ನೃತ್ಯಾರಾಧನೆ ಹೆಚ್ಚು ಪ್ರಸಿದ್ಧ. ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಕಲಾ ಪ್ರಕಾರವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ನಶಿಸಿ, ಅವಸಾನದ ಅಂಚಿನಲ್ಲಿದೆ.
     ಕಡಲ ಮಕ್ಕಳ ಒಡಲಾಳ ಭಕ್ತಿ, ಆರಾಧನೆ, ಸಮರ್ಪಣೆ ಮತ್ತು ಸದಾಶಯಗಳ ಮಾರ್ದವ ಮಿಶ್ರಣವೇ ಈ ಜಾನಪದ ನೃತ್ಯ- ಗೀತೆಯ ತಿರುಳು. ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ದವಾಗಿ ಹೆಜ್ಜೆ ಹಾಕುತ್ತಾ, ಭಾವಪರವಶರಾಗಿ ಹಾಡುತ್ತಾ ಬಾವುಕ ಸನ್ನಿವೇಶಗಳನ್ನು ಸೃಷ್ಥಿಸುವುದು ಅಪೂರ್ವ ಕಲಾವಂತಿಗೆ ಇದರಲ್ಲಿ ಅಡಗಿದೆ. ಹಿನ್ನಲೆ ಗಾಯನ ಮತ್ತು ವಾದ್ಯವೃಂದವಿಲ್ಲದೆ ಕುಂದಾಪುರ ಕನ್ನಡ ದ ಆಡುಮಾತಿನ ಸೊಗಡಿನೊಂದಿಗೆ ತಾವೇ ಹಾಡುತ್ತಾ ಕುಣಿಯುವುದೇ ಈ ನೃತ್ಯದ  ವಿಶೇಷತೆ.

ಹೌಂದೇರಾಯನ ಓಲಗದ ಹಿನ್ನಲೆ:
        ಹೌಂದೇರಾಯ ಎಂಬ ತುಂಡರಸನು ಪ್ರಾಚೀನ ಜೈನ ರಾಜರಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನವನ್ನು ಆಳುತ್ತಿದ್ದ ಎಂದ ಐತಿಹ್ಯವಿದೆ. ಜನಪರ ಆಡಳಿತದೊಂದಿಗೆ ಸದಾ ಕಲಾಪ್ರಿಯನಾಗಿದ್ದ ಹಾಗೂ ಆತನಿಗೆ ಹೊಗಳಿಕೆ ಎಂದರೆ ಇಷ್ಟವಾಗುತ್ತಿತ್ತು. ಮೊದಮೊದಲು ಹೊಗಳಿಕೆಯು ಕೇವಲ ಆಡುಮಾತಿಗೆ ಸೀಮಿತವಾಗಿತ್ತು. ಹೊಗಳು ಭಟರು ಹಾಡು ಮತ್ತು ಕುಣಿತಗಳಿಂದ ರಾಜನನ್ನು ಹೆಚ್ಚು ಸಂತೋಷ ಪಡಿಸಬಹುದು ಎಂಬ ದೃಷ್ಠಿಯಿಂದ ಯುಶಕ್ತಿಗಳು ನೃತ್ಯ ಮತ್ತು ಹಾಡಿನಲ್ಲಿ ಇನ್ನಷ್ಟು ಆರ್ಭಟ ತೋರಿಸಿದರು. ರಾಜನಿಗೆ ಮೆಚ್ಚಿಗೆಯಾಗಿ ಅದನ್ನು ಕಡ್ಡಾಯಗೊಳಿಸಿದನು. ಈ ಹೊಗಳಿಕೆ ಹಾಡು-ನೃತ್ಯ ಪ್ರಕಾರವನ್ನು ಮುಂದುವರಿಸಬೇಕೆ? ಮುಂದುವರಿಸಬಹುದಾದರೆ ಯಾರ ಹೆಸರಿನಲ್ಲಿ ಹೊಗಳಿಕೆ ಇರಬೇಕು ಎಂಬ ಜಿಜ್ಞಾಸೆ ಜನರಲ್ಲಿ ಚರ್ಚಿತವಾಯಿತು. ನಾವು ರಾಜನನ್ನು ದೇವರಂತೆ ಕಾಣುತ್ತಿದ್ದೇವೆ ಆದ್ದರಿಂದ ಹೌಂದೇರಾಯನ ಹೆಸರಿನಲ್ಲಿ ನಾವು ದೇವರನ್ನು ಹೊಗಳೋಣ ಎಂದು ಹಿರಿಯರು ತಿರ್ಮಾನಿಸಿದರು.

ಸಮುದ್ರರಾಯನ ಓಲಗ:
   ಉಡುಪಿಯಿಂದ ಉತ್ತರಕ್ಕೆ ಕಡಲ ಭಾಗದ ಜನ ಆಚರಿಸುವ ಒಂದು ಆಚರಣೆಯಾಗಿದ್ದು, ಕಡಲ ತೀರದ ಜನರು ಈ ಆಚರಣೆಯನ್ನು `ಸಮುದ್ರ ರಾಯನ ಓಲಗ' `ಗೋವಿಂದ ರಾಯನ ಓಲಗ' ಎಂದು ಕರೆಯುತ್ತಾರೆ. ಫಲ ಸಮೃದ್ಧಿಗಾಗಿ ಪುರುಷರಿಂದ ಮಾತ್ರವೇ ನಡೆಯುವ ಕುಣಿತ ಇದಾಗಿದ್ದು, ಇಲ್ಲಿನ ಜನರ ಆಚರಣೆಯ ಪ್ರಕಾರ ಐದು ಪ್ರಕಾರದ ಕುಣಿತಗಳಿವೆ. ಕುಂದಾಪುರ, ಅಂಪಾರು ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂದೂರಾಯನೆಂಬ ಒರ್ವ ದೊರೆಯ ಭಂಡಾರವೆಲ್ಲ ಒಮ್ಮೆ ದಿವಾಳಿಯಾಗಿ ಹೋದಾಗ ಆತನ ಮಂತ್ರಿ ಹೌಂದೇರಾಯನು ಪುನಃ ತುಂಬಿಸಿಕೊಟ್ಟನೆಂಬ ಸ್ಮರಣಾರ್ಥವಾಗಿ ಸಮೃದ್ಧಿ ತುಂಬುವ ಕುಣಿತವಾಗಿ ಇದು ಸಂಪ್ರದಾಯದಲ್ಲಿದೆ. ಈ ರೀತಿ ಸಂಪ್ರದಾಯಬದ್ದವಾದ ಕುಣಿತವನ್ನು ಬೀಜಾಡಿ ಮತ್ತು ಅಂಪಾರಿನ ತಂಡದವರು ಹಾಗೂ ಮೀನುಗಾರರು ಈಗಲೂ  ಹಬ್ಬ ಹರಿದಿನಗಳಲ್ಲಿ ಆಚರಿಸಿಕೊಂಡು ಬಂದಿದ್ದಾರೆ.
ಅಂದಿನ ಆ ದೃಡ ನಿಧರ್ಾರದಂತೆ ಈ ಇಪ್ಪತ್ತೊಂದನೆ ಶತಮಾನದಲ್ಲಿ ನೃತ್ಯ ಪ್ರಕಾರವನ್ನು ಉಳಿಸಲು ಉಡುಪಿ ತಾಲೂಕಿನ ಸಾಲಿಗ್ರಾಮ ಶ್ರೀ ಗುರುಮಾರುತಿ ಹೌಂದೇರಾಯನ ಜಾನಪದ ನೃತ್ಯ ತಂಡ ಎರಡೂವರೆ ದಶಕಗಳಿಂದ ಹಾಗೂ ರಾಜ್ಯಾದ್ಯಂತ ನಾಡ ಉತ್ಸವ, ಜಾನಪದ ಜಾತ್ರೆ, ಸಾಹಿತ್ಯ ಸಮ್ಮೇಳನ ಹಾಗೂ ಉಡುಪಿ ಅಷ್ಠ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದೆ. ಹೊರರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

   ಸ್ವಾಮಿಗಿಂದು ವಾಲ್ಗುವೆ...ತಾಯಿ ತುಳುಸಿ ವಾಲ್ಗುವೆ.. ಸರ್ವದೇವರಿಗೆ ವಾಲ್ಗುವೇ..ಸರ್ವ ಅಮ್ಮನವರಿಗೆ ವಾಲ್ಗುವೆ..ಗಿರಿಗಳಗೆಲ್ಲ ವಾಲ್ಗುವೆ..ಮುನಿಗಳಿಗೆಲ್ಲ ವಾಲ್ಗುವೆ..ಸಕಲ ಅವತಾರಕ್ಕೆ ವಾಲ್ಗುವೆ.. ಹೀಗೆ ಆರಂಭವಾಗುವ
ಹೌಂದೇರಾಯನ ನೃತ್ಯ ಪ್ರಕಾರಗಳಲ್ಲಿ ಆರು ಭಾಗಗಳಿವೆ.

1.ಓಲಗ ಸಂಧಿ: ಯಾರ ಮನೆಯಲ್ಲಿ ಹೌಂದೇರಾಯನ ಓಲಗದ ಸೇವೆಯನ್ನು ನಡೆಸುತ್ತಾರೋ ಆ ಮನೆಯ ಯಜಮಾನನ ಹೆಸರಿನಲ್ಲಿ  ಈ ಹರಕೆ ಸೇವೆ ಕಥೆಯೊಂದಿದೆ ಪ್ರಾರಂಬಿಸಲಾಗುವುದು.
2.ಬ್ಯಾಂಟಿ ಸಂಧಿ: ರಾಜನ ಆಳ್ವಿಕೆ ಕಾಲದಲ್ಲಿ ಪ್ರಜೆಗಳ ಬೆಳೆ,ಆಸ್ತಿ, ಮತ್ತು ಜೀವ ಹಾನಿ ಮಾಡುವ ಕಾಡು ಮೃಗಗಳನ್ನು ಬೇಟೆಯಾಡುವುದನ್ನು, ಬೇಟೆಯಲ್ಲಿ ಸಹಕರಿಸಿದವರಿಗೆ ಮಾಂಸವನ್ನು ಹಂಚುವುದನ್ನು ಮೈನವಿರೇಳುವಂತೆ ಹಾಡುವುದು.
3.ಕೋಡಂಗಿ ಸಂಧಿ: ಇದು ಹನುಮಂತ ದೇವರ ಹೊಗಳಿಕೆಯ ಹಾಡು.  ಆಂಜನೆಯನನ್ನು ಸಲುಗೆಯಿಂದ ಕೋಡಂಗಿ ಎಂದು ಕರೆದು ಅವನಿಗಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಅಣಕಿಸುತ್ತಾ, ರೇಗಿಸುತ್ತಾ ಹಾಗೇ ಪೂಜಿಸಿ, ಹೊಗಳಿಕೆಯಿಂದ ಉಬ್ಬಿಸಿ ಸಂತೈಸುವುದು ನಂತರ ತಂಡದ ಹಿರಿಯರನ್ನು ಕೊಡಂಗಿ ( ಹನುಮಂತ)ನನ್ನು ಆವಾಹಿಸಿ ತೃಪ್ತಿ ಪಡಿಸುವುದಾಗಿದೆ.
4.ಶಿವರಾಯ ಸಂಧಿ: ಶಿವನನ್ನು ಸ್ತುತಿಸುತ್ತಾ ಹರಿ-ಹರರು ಒಂದೇ ಎಂದು ಸಾರುತ್ತಾ ಶಿವ ಮತ್ತು ರಾಮನನ್ನು ಹೊಗಳುವುದು.
5. ಕೋಲಾಟ ಸಂಧಿ: ಶ್ರೀ ಕೃಷ್ಣನ ಲೀಲೆಯನ್ನು ಕೊಂಡಾಡುತ್ತಾ ಕೋಲಾಟದ ಹೆಜ್ಜೆಯೊಂದಿದೆ ಭಕ್ತಿ ಪರಾಕಾಷ್ಠೆಯ ವಾತಾವರಣವನ್ನು ನಿರ್ಮಿಸುವುದು.
6.ಅರ್ಪಿತ ಸಂಧಿ: ಈ ತನಕ ನೃತ್ಯ ಹಾಡುಗಳಿಂದ ನಡೆಸಿದ ಸೇವೆಗಳೆಲ್ಲವೂ ನಿಮಗೆ ಅರ್ಪಿತ ಎಂದು ಹಾಡುತ್ತಾ ವಂದಿಸುವುದು. 


2:15 PM | 0 comments

ಕಾಲ ಬದ್ಲಾಯ್ತಾ? ಜನ ಬದ್ಲಾಯ್ರಾ?

       ಲ್ಲಾ . . . ಮರ್ರೆ, ನಮ್ ದೇಶ, ಭಾಸಿ, ಸಂಸ್ಕ್ರತಿ ಅಂದೆಲ್ಲಾ ಹೇಳೂದ್ ಸುಮ್ನೆ ಮರ್ರೆ. ಎಂತಾಕ್ ಗೊಯಿತಾ? ಇದೆಲ್ಲಾ ಮಾಡ್ತಾ ಕೂಕಂಡ್ರೆ ಅದ್ ಕೂಳ್ ಹಾಕತ್ತಾ ಅಂದೀಕಿ ಎಲ್ಲಾ ಕೇಂತ್ರೆ. ಆದ್ರೂ ಮನ್ಸ್ ಕೇಂತಿಲ್ಲಾ ಕಾಣಿ. ಎಂತಾಕಂದ್ರೆ, ಬೆಂಗ್ಳೂರ್ ಬಂಬಾಯಿ ಹಾಂಗೆ ನಮ್ ಕುಂದಾಪ್ರ ಬದಿಯಾಗೂ ಎಲ್ಲಾ ಬದ್ಲ ಆಪುಕ್ ಸುರುವಾಯ್ತ್ ಕಾಣಿ ಮದ್ಲ್ ರಸ್ತಿ ಬದಿತಾಗ್ ಎಷ್ಟ್ ಮರ್ಗಳ್ (ಮರಗಳು) ಇತ್ತ್ ಬಲ್ಲಿಯಾ? ಈಗ ಅದ್ನೆಲ್ಲಾ ಕಡ್ದ್ ಕಡ್ದ್ ಹಾಕೀರೆ. ಯಾವ್ ಊರ್ ಎಲ್ಲ್ ಬಂತ್ ಅಂದೀಕಿ ಗುತಾತಿಲ್ಲೆ, ಈಗಂತೂ ಯಲ್ಲಾ ಮನಿಗೂ ಒಡ್ದ್ ಒಡ್ದ್ ಹಾಕ್ತಿದ್ರೆ. ಇದೆಲ್ಲಾ ಕಂಡ್ರೆ ಬ್ಯಾಜರ್ ಬತ್ತತ್ತ್. ಮದಿ ಮಾಡಿ ಕಾಣ್ಕಂಬ್ರ್ ಮನಿ ಕಟ್ಟಿ ಕಾಣ್ಕಂಬ್ರ್... ಇದ್ ನೀವೆಲ್ಲಾ ಕೇಂಡ್ ಗಾದಿ ಅಲ್ದಾ ಹೇಳಿ ? ಒಂದ್ ಕಾಲ್ದಾಗ್ ಇಂಗ್ಲೀಸ್ರ್ ಬಂದ್ ಸಂಪತ್ತ್ ಎಲ್ಲಾ ಲೂಟಿ ಮಾಡ್ದ್ ಹಾಂಗೆ ಈ ನಾಗ್ರಿಕತಿ ಎಂಬ್ ಭೂತ್ ಬಂದ್ ಒಳ್ಳೆದ್ ಎಲ್ಲಾ ಹಾಳಾತ್ತಿತ್ತ್ ಮರ್ರೆ. ಮೊನ್ನಿ ಬಂದ್ ಪೇಪರ್ನಾಗೆ ‘ಮನಿ ಒಡಿತ್ರ್, ಜನ್ರ್ ಗೋಳನ್ನ್ ಕೇಳೋರ್ ಯಾರ್?’ ಅಂದೀಕಿ ಇತ್ತ್ ಮರ್ರೆ. ಇನ್ನ್ ಮಳಿಗಾಲ ಸುರುವಾತ್ತಲ್ದೇ. ರಸ್ತಿ ಮ್ಯಾಲೆ ದಡ್ಡ್ ದಡ್ಡ್ ಹೊಂಡ ಕಾಂತ್ ಕಾಣಿ. ಅದ್ರಗೆಲ್ಲಾ ನೀರ್ ತುಂಬ್ಕಂಡ್, ತಿರ್‍ಗಾಡುಕಾತಿಲ್ಲೆ. ಅಂದಾಗ ನಮ್ಮ ಕುಂದಾಪ್ರ್ ಭಾಸೀನ ಯಾರ್ ಮಾತಾಡ್ತ್ರ್ ಹೇಳಿ. ಎಲ್ಲಾರೂ ಮಾತಾಡ್ರೆ, ಎಂತಾ. . . ಮರ್ರೆ ? ಹೋಯ್ಕ್ ಬರ್ಕ್ ಅಂದೀಕಿ ಹೇಳ್ತ್ರಿ. ಅಂದ್ಹೇಳಿ ಪರೂರಿನರ್ ನ್ಯಗ್ಯಾಡ್ತ್ರ್ ಗೊಯ್ತಾ? ಅದ್ಕೇ ರಗ್ಳೀ ಬ್ಯಾಡ ಅಂದೀಕಿ ಲಾಟ್ ಲಾಟ್ ಇಂಗ್ಲೀಸ್ ಮಾತಾಡೂಕು ನಮ್ ಬದಿಯಾರ್ ಕಲ್ತೀರೆ. ಅದ್ಕೇ ನಟ್ಟಿ ನೆಡು ಹೆಂಗ್ಸ್ರ್ ಎಲ್ಲಾ ಕಾಲಾ ಬದ್ಲ್ ಆಯ್ತ್ ಮರ್ರೆ ಅಂತ್ರ್ ಕಾಣಿ. ಹಾಂಗೆ ಕುಂದಾಪ್ರ, ಗೋಳಿಯಂಗ್ಡಿ ಬದಿಯಾಗ್ ಕುಡ್ಬಿ ಅಂದೀಕಿ ಜನ್ರ್ ಇದ್ರ್. ನಿಮ್ಗೆ ಗೊತ್ತಿಪ್ಕೂ ಸಾಕ್ ಅಲ್ದಾ? ಅವ್ರ್ ಹೋಳಿ ಹಬ್ಬೊ ಅಂದೀಕಿ ಮಾಡ್ತ್ರ್. ಎಷ್ಟ್ ಸಾಪಾಯ್ ಇರತ್ತ್ ಗೊಯಿತಾ? ಶಿವ್ ರಾತ್ರಿ ಅಮಾಸಿ ದಾಟದ್ ಮ್ಯಾಲೆ ಹೋಳಿ ಹುಣ್ಮಿಗ್ ಈ ಹಬ್ಬೊ ಮುಗಿತ್ತ್ ಕಾಣಿ. 5 ದಿನೊ ಇವ್ರೆಲ್ಲಾ ಕೊಣುಕ್ ಹ್ವಾತ್ರೆ. ಈ ಹಬ್ಬೊ ಸುರು ಮಾಡುಕ್ ರೀತಿ ರಿವಾಜ್ ಎಲ್ಲಾ ಇತ್ತ್ ಕಾಣಿ. ಎಣ್ಣಿ ಸ್ನಾನ ಮಾಡಿ ದೇವ್ರಿಗೆ ಕಾಯ್ ಎಲ್ಲಾ  ಇಟ್ಟ್ ಮೂರ್ತ್ (ಮಹೂರ್ತ) ಅಂದೀಕಿ ಮಾಡ್ತ್ರ್. ಕುಲ್‍ದೇವ್ರ್ ಮಲ್ಲಿಕಾರ್ಜುನನಿಗೆ ಪೂಜಿ ಮಾಡ್ತ್ರಂಬರೆ. ಕೊಣ್ವಂತಿಗಂತೂ ನವಿಲ್‍ಗರಿ, ರುಮಾಲ್, ನಿಲ್ವಂಗಿ, ಗುಮ್ಟಿ, ಹಟ್ಟಿಮದ್ದ (ಹಕ್ಕಿ ಬಾಲ) ಎಲಾ ಕಟ್ಕ್ ಕೊಣುಕ್ ಸುರು ಮಾಡ್ರೆ, ನಾವೂ ಕೊಣಿಕ್ ಅಮಗಾತ್ತ್ ಕಾಣಿ ಈ ಹಬ್ಬ ಕಾಂಬುಕ್ ಬಾಳಾ ಚಂದೊ ಮರ್ರೆ. ಈಗ್ ಈಗ್ ಮೊದ್ಲಿನ್ ಹಾಂಗ್ ನಿಯ್ಮ್ ಎಲ್ಲಾ ಮಾಯಾ ಆತಾ ಬಂದೀತ್ ಕಾಣಿ. ಅದ್ಕೇ ಓದ್‍ದೋರ್ ಇದ್ನ್ ಪಟ ತೆಗ್ದ್ ಇಡುದ್, ವೀಡಿಯೋ ಸೂಟಿಂಗ್ ಮಾಡಿ ಇಡುದ್ ಎಲ್ಲಾ ಮಾಡ್ತಾ ಇದ್ರೆ. ಎನೇ ಆಯ್ಲಿ ನಮ್ ಭಾಸಿ, ಕಲಿ, ಕುಣ್ತ ಎಲ್ಲಾ ಉಳ್ಸುದ್ ನಮ್ ನಿಮ್ ಕೆಲ್ಸ್ ಅಲ್ದಾ? ಆದ್ರೂ ಕಾಲ ಬದ್ಲಾಯಿಲ್ಲಾ ಮರ್ರೆ. ಜನ್ರ್ ಬದಲಾಯಿರ್ ಅಷ್ಟೆ. ನಾವು ನೀವ್ ನಮ್ಮ್ ಮನ್ಸ್ ಸಲ್ಪ್ ಬದ್ಲಾಯಸ್ ಕಂಡ್ ಹೊಸ್ತ್ರ ಜೋತಿಗ್ ಹಳ್ತನ್ನೂ ಉಳ್ಸ್ವ ಆಗ್ದಾ? ಏನಂತ್ರಿ?
-ಡಾ. ಭಾರತಿ ಮರವಂತೆ.
ಪ್ರಾಧ್ಯಾಪಕರು.ಕುಂದಾಪ್ರ.ಕಾಂ- editor@kundapra.com
4:19 PM | 0 comments

ಕಲಿಸು ಬಸ೦ತಿ ಕಲಿಸು....!

ಈ ಬರಹವನ್ನು ಓದುವ ಮೊದಲು ಇದರೊ೦ದಿಗಿರುವ ಚಿತ್ರಗಳನ್ನೊಮ್ಮೆ ನೋಡಿಬಿಡಿ.

    ನಿಜ. ಇದ್ಯಾವ ಕಾಲ್ಪನಿಕ ಚಿತ್ರವೂ ಅಲ್ಲ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಯುವತಿಯ ಹೆಸರು ಬಸ೦ತಿ. ತನ್ನ ಪಾದದ ಬೆರಳುಗಳಿ೦ದ ಚಾಕ್ ಅನ್ನು ಹಿಡಿದು ಕಪ್ಪು ಬೋರ್ಡಿನ ಮೇಲೆ ಅಕ್ಷರಗಳನ್ನು ಬರೆಯುತ್ತಿರುವ ಬಸ೦ತಿ ಸರಕಾರಿ ಶಾಲೆಯೊ೦ದರಲ್ಲಿ ಪ್ಯಾರಾ ಶಿಕ್ಷಕಿಯಾಗಿ ಕಾರ‍್ಯ ನಿರ್ವಹಿಸುತ್ತಿರುವವಳು.ಎರಡೂ ಕೈಗಳಿಲ್ಲದೆ ಶಿಕ್ಷಕಿಯಾಗಿ ಆಕೆ ತನ್ನ ಕಾರ‍್ಯವನ್ನು ನಿರ್ವಹಿಸುತ್ತಿರುವ ಪರಿ ನಿಜಕ್ಕೂ ಬೆರಗುಗೊಳಿಸುವ೦ತಾದ್ದು. 
      ನೇರ ವಿಷಯಕ್ಕೆ ಬರುತ್ತೀನಿ. ಈಕೆ ಜಾರ್ಖ೦ಡ್‌ನ ಸಿ೦ದ್ರಿ ಪಟ್ಟಣದವಳು. ಹುಟ್ಟಿನಿ೦ದಲೇ ಈಕೆಯ ಕೈಗಳು ಬೆಳವಣಿಗೆ ಕಾಣಲೇ ಇಲ್ಲ. ಅರ್ಧ೦ಬರ್ಧ ಬೆಳೆದ ಕೈ ಬರಿಯ ಮಾ೦ಸದ ಮುದ್ದೆಯಾಗಷ್ಟೇ ಉಳಿದುಕೊ೦ಡಿತು.ಈಕೆ ಹುಟ್ಟಿದಾಗ  ಈಕೆಯನ್ನು ಸಾಯಿಸಿಬಿಡುವ೦ತೆ ಕೂಡ ಈಕೆಯ ಹತ್ತಿರದ ಬ೦ಧುಗಳು ಇವಳ ಹೆತ್ತವರಿಗೆ ಸಲಹೆ ನೀಡಿದ್ದರು. ಆದರೆ ಹೆತ್ತ ಕರುಳು ಅ೦ತಾದ್ದನ್ನ ಯಾವತ್ತೂ ಒಪ್ಪುವುದಿಲ್ಲ. ಮಗು ಹೇಗೆ ಇದ್ದರೂ ನಾವು ಅದನ್ನು ಬೆಳೆಸುತ್ತೇವೆ ಎ೦ದು ಗಟ್ಟಿ ಮನಸ್ಸು ಮಾಡಿದ್ದು ಅಪ್ಪ ಮಾಧವ ಸಿ೦ಗ್ ಮತ್ತು ಅಮ್ಮ ಪ್ರಭಾವತಿ ದೇವಿ. ಪುಟ್ಟ ಮಗು ಬಸ೦ತಿ ಕೈಗಳಿಲ್ಲದೆ ಬದುಕುವುದನ್ನು ಅಭ್ಯಾಸ ಮಾಡಿಕೊ೦ಡಿತ್ತು. ಅದಾಗಿಯೂ ಹೆತ್ತವರಿಗೆ ಅವಳನ್ನು ಶಾಲೆಗೆ ಕಳುಹಿಸುವ ಇ೦ಗಿತ ಇರಲಿಲ್ಲ. ಕೈ ಇಲ್ಲದ ಮೇಲೆ ಬರೆಯುವುದು ಹೇಗೆ?
      ಬಸ೦ತಿ ಶಾಲೆಗಾಗಿ ರಚ್ಚೆ ಹಿಡಿದಿದ್ದಳು.ಅ೦ತೂ ಶಾಲೆಗೆ ಸೇರಿಸಿದ್ದಾಗಿತ್ತು. ಕಷ್ಟಪಟ್ಟು ಬಸ೦ತಿ ಕಾಲಿನಲ್ಲಿ ಪೆನ್ನು ಹಿಡಿದು ಬರೆಯೋದನ್ನು ರೂಢಿಸಿಕೊ೦ಡಳು. ಎಲ್ಲಾ ಅವಮಾನ ನಾಚಿಕೆ ಪ್ರಶ೦ಸೆ ಅಭಿಮಾನ ಪ್ರೋತ್ಸಾಹಗಳ ನಡುವೆ ಬೆಳೆದು ಬ೦ದ ಬಸ೦ತಿ ಹಾಗೆ ಕಲಿಯುತ್ತಾ ಕಲಿಯುತ್ತಾ ೧೯೯೩ ರಲ್ಲಿ ಎಸ್‌ಎಸ್‌ಎಲ್‌ಸಿ ಯನ್ನು ಪಾಸು ಮಾಡಿಕೊ೦ಡಳು. ನಿಮಗೆ ಗೊತ್ತಿರಲಿ. ಅವಳು ಒ೦ದು ಬಾರಿಯೂ ಫೇಲಾಗಲಿಲ್ಲ. ಬದುಕಿನೆಡೆಗಿನ ಹಠ ಗೆಲುವನ್ನು ಕೊಡಿಸುತ್ತದೆ. ಆ ಬಳಿಕ ಸಿ೦ದ್ರಿಯ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ  ಬಿಎ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ  ಗಳಿಸಿದ ಬಸ೦ತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಡಿಪ್ಲೊಮಾ ವನ್ನು ಮಾಡಿದಳು. 
      ಎಸ್‌ಎಸ್‌ಎಲ್‌ಸಿ  ಯ ಬಳಿಕ ತನ್ನ ಮನೆಯಲ್ಲೇ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದ ಬಸ೦ತಿಗೆ ಜೀವನ ನಿರ್ವಹಣೆಗೆ ಅದು ಅನಿವಾರ‍್ಯವಾಗಿತ್ತು. ವಿದ್ಯಾಬ್ಯಾಸದ ಬಳಿಕ ರೊದ್‌ಬಾ೦ದ್ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕಿಯಾಗಿ ನೇಮಕಗೊ೦ಡಳು.ಗಣಿತ ಸಮಾಜ ವಿಜ್ಞಾನ ಇ೦ಗ್ಲೀಷ್ ಸ೦ಸ್ಕೃತ ಮಕ್ಕಳಿಗೆ ಹೇಳಿ ಕೊಡಬೇಕಿತ್ತು. ಮೊದಮೊದಲು ಪುಸ್ತಕದಲ್ಲಿ ಕಾಲಿನಿ೦ದ ಬರೆದು ಬರೆದು ಪಾಠ ಹೇಳಿಕೊಡುತ್ತಿದ್ದ ಬಸ೦ತಿ ಕರಿಹಲಗೆಯ ಅನಿವಾರ‍್ಯತೆಯನ್ನು ಮನಗ೦ಡಳು. ಅದಕ್ಕಾಗಿ ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಕೆಯೇ ಹೇಳುವ೦ತೆ. ಮೊದಮೊದಲಿಗೆ ಕಾಲನ್ನು ಎತ್ತಿ ಬೋರ್ಡ್ ನಲ್ಲಿ ಬರೆಯುವುದು ತು೦ಬಾ ಕಷ್ಟ ಅನ್ನಿಸುತಿತ್ತು. ಒ೦ದೇ ಕಾಲಿನಲ್ಲಿ ದೇಹ ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತಿತ್ತು. ಚಾಕ್ ಮತ್ತು ಪೆನ್ನಿಗೂ ವ್ಯತ್ಯಾಸ ಇದೆಯಲ್ಲಾ ಅದು ಮತ್ತಷ್ಟು ಕಿರಿಕಿರಿ ಉ೦ಟು ಮಾಡಿತ್ತು. ಆದರೆ ಬೋರ್ಡ್ ಮೂಲಕ ಒ೦ದೇ  ಬಾರಿಗೆ ಹೆಚ್ಚು ಮಕ್ಕಳನ್ನು ತಲುಪಬಹುದು ಆ ಕಾರಣಕ್ಕಾಗಿಯೇ ಸತತ ಅಭ್ಯಾಸ ಮಾಡಿದೆ. ಈಗ ನೇರವಾಗಿ ನಾನು ಗೆರೆಗಳನ್ನು ಕೂಡ ಎಳೆಯಬಲ್ಲೆ. ಡಯಾಗ್ರಾಮುಗಳನ್ನು ರಚಿಸಬಲ್ಲೆ. ನಿಜ. ಬಸ೦ತಿಯ ಮನೋಬಲ ಅತ್ಯ೦ತ ಗಟ್ಟಿಯಾದದ್ದು.
      ಬಸ೦ತಿಯ ಕುಟು೦ಬ ದೊಡ್ಡದು. ಐದು ಜನ ಹೆಣ್ಮಕ್ಕಳಲ್ಲಿ ಈಕೆಯೇ ಹಿರಿಯಳು. ಮೂವರಿಗೆ ಮದುವೆಯಾಗಿದೆ. ತ೦ದೆ ಮೊದಲು ಎಫ್‌ಸಿಐ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒ೦ದು ಹ೦ತಕ್ಕೆ ಎಲ್ಲವೂ ಚೆನ್ನಾಗಿತ್ತು ಅ೦ತನ್ನಿಸಿತ್ತು. ಆದರೆ ತ೦ದೆಯ ನಿವೃತ್ತಿಯ ಅ೦ಚಿನಲ್ಲಿ ಆ ಕ೦ಪೆನಿ ಇದ್ದಕ್ಕಿ೦ದ್ದ೦ತೆ ಬಾಗಿಲು ಹಾಕಿಕೊ೦ಡಿತ್ತು. ಆ ಬಳಿಕ ಮನೆಯ ಹೆಚ್ಚಿನ ಜವಾಬ್ದಾರಿ ಬಸ೦ತಿಯ ಹೆಗಲೇರಿತ್ತು. ಅದರೊ೦ದಿಗೆ  ಮತ್ತಷ್ಟು ಕಷ್ಟ ಹೆಚ್ಚಿಸಲೋ ಎ೦ಬ೦ತೆ  ಅಪ್ಪನಿಗೆ ಪಕ್ಷವಾತವೂ ಉ೦ಟಾಯಿತು. ಅಮ್ಮ ತೀರಿಕೊ೦ಡರು. ತಮ್ಮ ನಿರ೦ಜನ ಸಿ೦ಗ್ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದಾನೆ.ಕಿರಿಯ ತ೦ಗಿ ಲಲಿತಾಳನ್ನು ಓದಿಸಿ ಮದುವೆ ಮಾಡುವ ಜವಬ್ದಾರಿ ಇದೀಗ ಬಸ೦ತಿ ಹೆಗಲಿಗೆ ಬಿದ್ದಿದೆ. ಅಷ್ಟಾಗಿಯೂ ಆಕೆ ಎದೆಗು೦ದಿಲ್ಲ.ತನ್ನ ಪುಟ್ಟ ಪುಟ್ಟ ವಿದ್ಯಾರ್ಥಿಗಳ ಮತ್ತು ತನ್ನ  ಕುಟು೦ಬದ ಸದಸ್ಯರ ಸ೦ತೋಷದಲ್ಲೇ ತನ್ನ ಬದುಕಿನ ಸ೦ತೋಷವನ್ನು ಕ೦ಡುಕೊಳ್ಳುತ್ತಿದ್ದಾಳೆ. ಆಕೆಯ ವೈಯಕ್ತಿಕ  ಕನಸುಗಳು ಅದೇನು ಇವೆಯೋ ಬಲ್ಲವರಾರು? 
      ನಿಜ. ಎರಡೂ ಕೈಗಳಿಲ್ಲದ ಬಸ೦ತಿ ಇವತ್ತು ನೂರಾರು ಮಕ್ಕಳಿಗೆ ಪಾಠ ಹೇಳಿಕೊಡುವ ಮಕ್ಕಳ ಮೆಚ್ಚಿನ  ಶಿಕ್ಷಕಿ.  ಕಾಲುಗಳಿ೦ದ ಬೋರ್ಡಿನಲ್ಲಿ ಬರೆಯುತ್ತಾಳೆ. ಕಾಲಲ್ಲಿ ಪೆನ್ನು ಹಿಡಿದು ಮಕ್ಕಳ ನೋಟ್ಸು ,ಅಕ್ಷರ ತಿದ್ದುತ್ತಾಳೆ.ಈಕೆ ತನ್ನ ಸ೦ಪೂರ್ಣ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ಬರೆಯುವುದು, ಬಟ್ಟೆ ಒಗೆಯುವುದು ಅಡುಗೆ ಮಾಡುವುದು ಗುಡಿಸುವುದು ನೆಲ ಒರೆಸುವುದು, ಇಸ್ತ್ರಿ ಮಾಡುವುದು ಹೀಗೆ ಎಲ್ಲವನ್ನೂ ಬಸ೦ತಿ ಅಚ್ಚುಕಟ್ಟಾಗಿ ಮಾಡುತ್ತಾಳೆ. ಅವತ್ತು ಆಕೆಯನ್ನು ಸಾಯಿಸಿಬಿಡಿ ಎ೦ದವರು ಇವತ್ತು ಈಕೆಯ ಮುಗುಳ್ನಗೆಯೆದುರು ತಲೆ ತಗ್ಗಿಸುತ್ತಾರೆ. ಅಕ್ಕ ಪಕ್ಕದವರು ಈಕೆಯನ್ನು ನೋಡಿ ಅಭಿಮಾನ ಸ್ಫುರಿಸುತ್ತಾರೆ. ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಒ೦ದಿಡೀ ಸ೦ಸಾರದ ಜವಾಬ್ದಾರಿಯನ್ನು ಹೊತ್ತಿರುವ ಈಕೆಯ ಮನೋಸ್ಥೈರ್ಯವನ್ನು ನೋಡಿ ಮನಸ್ಸಿನಲ್ಲೇ ಸಲಾ೦ ಹೊಡೆಯುತ್ತಾರೆ. ಹೌದು. ಇದಕ್ಕೆಲ್ಲಾ ಕಾರಣವಾಗಿದ್ದು ಬಸ೦ತಿ ಕುಮಾರಿಯಲ್ಲಿನ ಆತ್ಮವಿಶ್ವಾಸ. ಮತ್ತು ಬದುಕಿನ ಬಗೆಗೆ ಅವಳಿಗಿರುವ ಧನಾತ್ಮಕ ದೃಷ್ಟಿಕೋನ.
     ಇದನ್ನೆಲ್ಲಾ ಯಾಕೆಹೇಳಬೇಕಾಯಿತು ಅ೦ದರೆ ಹೆಣ್ಣುಮಕ್ಕಳು ಹುಟ್ಟಿದ ತಕ್ಷಣ ಮುಖ ಸಿ೦ಡರಿಸುವ ಜನರಿಗೆ ಬಸ೦ತಿಯ ಬದುಕು ನಿಜಕ್ಕೂ ಒ೦ದು ದೊಡ್ಡ ಪಾಠ. ಅವಳ ಜೊತೆಗೆ ಒ೦ದು ದೊಡ್ಡ ಬೆ೦ಬಲವಾಗಿ ನಿ೦ತು ಆಕೆಯ ಸಾಧನೆಗೆ ಕಾರಣರಾದ ತ೦ದೆತಾಯಿಗಳು ಕೂಡ ಇಲ್ಲಿ ಅಭಿನ೦ದನಾರ್ಹ. ಎಲ್ಲಾ ಅವಯವಗಳು ಸರಿಯಿದ್ದುಕೊ೦ಡು ನನ್ನಿ೦ದ ಏನೂ ಆಗದು ಅ೦ತ೦ದುಕೊ೦ಡು ಕೀಳರಿಮೆಯಿ೦ದ ನರಳುತ್ತಿರುವವರಿಗೆ , ಕೆಲಸ ಮಾಡಲು ಕು೦ಟು ನೆಪ ಹೇಳುವ  ಸೋಮಾರಿಗಳಿಗೆ, ಹೆಣ್ಣನ್ನು ದುರ್ಬಳು ಎ೦ಬ೦ತೆ ನೋಡುವ ಕೆಳಮನಸ್ಸಿನ ವ್ಯಕ್ತಿಗಳಿಗೆ, ದೈಹಿಕವಾಗಿ ಅಸಮರ್ಥರಾಗಿದ್ದುಕೊ೦ಡು ಒ೦ದು ಸ್ಫೂರ್ತಿಯ ಸೆಲೆಗಾಗಿ ಕಾಯುತ್ತಿರುವ ನೂರಾರು ಜೀವಗಳಿಗೆ ಬಸ೦ತಿಯ ಬದುಕು ಉತ್ತರವಾಗಬಲ್ಲದು. ನಮ್ಮ ನಡುವೆಯೇ ನೂರಾರು ಬಸ೦ತಿಯರು ಖ೦ಡಿತಾ ಇದ್ದಾರೆ. ನಾವುಗಳು ಅವರಿ೦ದ ಕಲಿತುಕೊಳ್ಳುವ೦ತಾದ್ದು ತು೦ಬಾನೇ ಇದೆ.ನಮಗೆ ಅವರನ್ನು ಗುರುತಿಸುವ ಮನಸ್ಸು ಮತ್ತು ದೃಷ್ಟಿ ಎರಡೂ ಇರಬೇಕು.ಅಷ್ಟೆ. 

- ನರೇ೦ದ್ರ ಎಸ್ ಗ೦ಗೊಳ್ಳಿ.

ಕುಂದಾಪ್ರ ಡಾಟ್ ಕಾಂ- editor@kundapra.com
11:48 PM | 0 comments

ಇ-ಮೇಲ್ ಪಡೆಯಲು ಇಲ್ಲಿ ನೊಂದಾಯಿಸಿ.

ಹೆಬ್ಬಾರರ ಅಂಕಣ

ಅಂಕಣ ಬರಹ - 2

Dictionary

Career

Entertainment

Ad here

Ad here

Byndoor Directory

Alvas Nudisiri spl pages

Web design & Hosting

Old age home in Kundapura

Nammabedra.com

Udupitoday.com

Kinnigolli.com

Kolluru dairy

Kolluru dairy

Shekar Ajekar

Videos

Cricket